ಸೂರತ್ : ranji trophy : ಕರ್ನಾಟಕ – ರೈಲ್ವೇಸ್ ಹೋರಾಟ !ರಣಜಿ ಟ್ರೋಫಿ ಕ್ರಿಕೆಟ್ ಕೂಟದ ಐದನೇ ಸುತ್ತಿನ ಪಂದ್ಯಗಳು ಶುಕ್ರವಾರದಿಂದ ವಿವಿಧ ತಾಣಗಳಲ್ಲಿ ಆರಂಭವಾಗಲಿವೆ. ಸೂರತ್ನಲ್ಲಿ ನಡೆಯಲಿರುವ ಪಂದ್ಯದಲ್ಲಿ ʼಸಿʼ ಬಣದ ಅಗ್ರಸ್ಥಾನಿ ಕರ್ನಾಟಕವು ರೈಲ್ವೇಸ್ ತಂಡವನ್ನು ಎದುರಿಸಲಿದೆ.
ತ್ರಿಪುರ ವಿರುಧ್ಧದ ಪಂದ್ಯದ ಬಳಿಕ ಸೂರತ್ ಗೆ ತೆರಳಲು ವಿಮಾನವೇರಿದ ಬಳಿಕ ಅಸ್ವಸ್ಥರಾಗಿ ಅಗರ್ತಲಾದಲ್ಲಿ ಆಸ್ಪತ್ರೆಗೆ ದಾಖಲಾದ ಮಯಾಂಕ್ ಅಗರ್ವಾಲ್ ಅವರು ರೈಲ್ವೇಸ್ ವಿರುಧ್ಧದ ಪಂದ್ಯದಲ್ಲಿ ಆಡುವುದಿಲ್ಲ. ಅವರ ಬದಲಾಗಿ ನಿಕಿನ್ ಜೋಸ್ ತಂಡವನ್ನು ಮುನ್ನಡೆಸಲಿದ್ದಾರೆ.
ಆಡಿದ ನಾಲ್ಕು ಪಂದ್ಯಗಳಲ್ಲಿ ಎರಡರಲ್ಲಿ ಜಯ ಸಾಧಿಸಿದ್ದ ಕರ್ನಾಟಕ ತಂಡವು ಇನ್ನೆರಡರಲ್ಲಿ ಸೋಲು , ಡ್ರಾ ಸಾಧಿಸಿ ಒಟ್ಟಾರೆ 15 ಅಂಕ ಸಂಪಾದಿಸಿದೆ.ತಮಿಳುನಾಡು ಕೂಡ ಎರಡರಲ್ಲಿ ಜಯಿಸಿದ್ದು 15 ಅಂಕ ಹೊಂದಿದೆ.ಆದರೆ ಕರ್ನಾಟಕ ಉತ್ತಮ ರನ್ ಧಾರಣೆಯ ಆಧಾರದಲ್ಲಿ ಅಗ್ರಸ್ಥಾನದಲ್ಲಿದೆ. ಮುಂದಿನ ಹಂತಕ್ಕೇರಬೇಕಾದರೆ ಕರ್ನಾಟಕ ತಂಡವು ಮುಂದಿನ ಮೂರು ಪಂದ್ಯಗಳಲ್ಲಿ ಬಹಳ ಎಚ್ಚರಿಕೆಯಿಂದ ಆಡಬೇಕಾಗಿದೆ. ರೈಲ್ವೇಸ್ 12 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದರೆ ಗುಜರಾತ್ 13 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಕರ್ನಾಟಕ ಮುಂದಿನೆರಡು ಪಂದ್ಯಗಳಲ್ಲಿ ರೈಲ್ವೇಸ್ ಮತ್ತು ತಮಿಳುನಾಡು ವಿರುಧ್ದ ಆಡಬೇಕಾಗಿದೆ.ಇಲ್ಲಿ ಕರ್ನಾಟಕ ಗೆಲುವಿಗೆ ಪ್ರಯತ್ನಪಡಬೇಕಾಗಿದೆ.
ಮುಂಬಯಿ ತಂಡಕ್ಕೆ ಮರಳಿದ ಪೃಥ್ವಿಶಾ:
ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಿಂದ ಆಡಲು ಅನುಮತಿ ಪಡೆದಿರುವ ಪೃಥ್ವಿ ಶಾ ಅವರನ್ನು ಮುಂಬಯಿ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಫೆ. 2 ರಿಂದ ನಡೆಯಲಿರುವ ಬಂಗಾಲ ವಿರುದ್ಧದ ಪಂದ್ಯದಲ್ಲಿ ರಹಾನೆ ನೇತೃತ್ವದ ತಂಡದಲ್ಲಿ ಶಾ ಆಡಲಿದ್ದಾರೆ.