ಉಡುಪಿ : ಉಡುಪಿ ಶ್ರೀ ಕೃಷ್ಣ ಮಠದಲ್ಲಿ 252 ನೇ ಪರ್ಯಾಯ ಆರಂಭ ! ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ನಾಲ್ಕನೆಯ ಪರ್ಯಾಯ ಮತ್ತು ಶ್ರೀ ಕೃಷ್ಣ ಮಠದಲ್ಲಿ 252ನೆಯ ದ್ವೈವಾರ್ಷಿಕ ಪರ್ಯಾಯ ಗುರುವಾರ ಬೆಳಿಗ್ಗೆ ಶುಭಾರಂಭಗೊಂಡಿತು. ಪೀಠಾರೋಹಣಕ್ಕೆ ಮುನ್ನ ಕಾಪು ದಂಡತೀರ್ಥದಲ್ಲಿ ಸ್ನಾನ ಮಾಡಿ ಬಂದ ಶ್ರಿ ಸುಗುಣೇಂದ್ರ ತೀರ್ಥ ಶ್ರೀ ಪಾದರು ಮತ್ತು ಕಿರಿಯ ಯತಿ ಸುಶೀಂದ್ರ ತೀರ್ಥ ಶ್ರೀಪಾದರು ಇದೇ ಮೊದಲ ಬಾರಿಗೆ ಕಿನ್ನಿಮೂಲ್ಕಿಯಿಂದ ಆರಂಭಗೊಂಡ ಪರ್ಯಾಯ ಪುರ ಮೆರವಣಿಗೆಗೆ ಚಾಲನೆ ನೀಡಿದರು.
ಜೋಡುಕಟ್ಟೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡ ಶ್ರೀಪಾದರು ಅಲಂಕೃತವಾದ ವಾಹನದಲ್ಲಿ ಆಸೀನರಾದರು. ಮೆರವಣಿಗೆಯು ಮುಂಜಾನೆ ರಥಬೀದಿಗೆ ಆಗಮಿಸಿದಾಗ ವಾಹನದಿಂದಿಳಿದು ಹಾಸಿದ ಶ್ವೇತವಸ್ತ್ರದ ಮೇಲೆ ನಡೆದು ಬಂದರು.
ಶ್ರೀಯುತರು ಮೊದಲು ಕನಕನ ಕಿಂಡಿ ಮೂಲಕ ದೇವರ ದರ್ಶನ ಪಡೆದು ಅಷ್ಠಮಠಗಳು,ಚಂದ್ರೇಶ್ವರ,ಅನಂತೇಶ್ವರ ದೇವಸ್ಥಾನಗಳ ಪ್ರತಿನಿಧಿಗಳಿಗೆ ನವಗ್ರಹ ದಾನ ನೀಡಿದರು. ಅನಂತರ ಶ್ರೀ ಚಂದ್ರೇಶ್ವರ , ಶ್ರೀ ಅನಂತೇಶ್ವರ ದೇವಸ್ಥಾನ, ಮಧ್ವಾಚಾರ್ಯರ ಸನ್ನಿಧಿಗೆ ತೆರಳಿ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ನೈರ್ಮಲ್ಯ ವಿಸರ್ಜನಾ ಪೂಜೆ ನೆರವೇರಿಸಿದರು. ನಿರ್ಗಮನ ಪೀಠಾಧೀಶ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಮಂಗಳಾರತಿ ಬೆಳಗಿದರು.
ಸರ್ವಜ್ಞಪೀಠಾರೋಹಣ
ಪುತ್ತಿಗೆ ಶ್ರೀಪಾದರು ಶ್ರೀ ಕೃಷ್ಣ ಮಠಕ್ಕೆ ಆಗಮಿಸಿ ದೇವರ ದರ್ಶನ ಪಡೆದ ಬಳಿಕ ಮಧ್ವಾಚಾರ್ಯರ ವಿಗ್ರಹದೆದುರು ಅಕ್ಷಯ ಪಾತ್ರೆ ಮತ್ತು ಸಟ್ಟುಗವನ್ನು ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹಸ್ತಾಂತರಿಸಿದರು. ಬೆಳಗ್ಗೆ 6 ಗಂಟೆಗೆ ಪುತ್ತಿಗೆ ಶ್ರೀ ಪಾದರು ಸರ್ವಜ್ಞಪೀಠಾರೋಹಣ ಮಾಡಿದರು. ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಇದರ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ನಂತರ ಬಡಗು ಮಾಳಿಗೆ ಯ ಅರಳುಗದ್ದಿಗೆಯಲ್ಲಿ ಗಂಧಾದ್ಯುಪಚಾರ,ಗೌರವಾರ್ಪಣೆ ನೆರವೇರಿತು.
ರಾಜಾಂಗಣದಲ್ಲಿ ನಡೆದ ಪರ್ಯಾಯ ದರ್ಬಾರ್ ಸಭೆಯಲ್ಲಿ ನಾಡಿನ ಗಣ್ಯ ಮಾನ್ಯರು ಪಾಲ್ಗೊಂಡರು. ಸಾಧಕರನ್ನು ಪುತ್ತಿಗೆ ಶ್ರೀಗಳು ಗೌರವಿಸಿದರು.ತಿರುಮಲ, ಶ್ರೀ ರಂಗಂ,ಪುರಿ, ಗಂಡಕಿ, ತಿರುವನಂತಪುರ, ಧರ್ಮಸ್ಥಳ, ಮಂತ್ರಾಲಯ , ದ್ವಾರಕೆ, ಮಧುರೆ, ಚಾಮುಂಡೇಶ್ವರಿ, ಆನೆಗುಡ್ಡೆ, ನೀಲಾವರ, ಪುತ್ತಿಗೆ ಶ್ರೀಗಳ ಪರಮ ಗುರು ಶ್ರೀ ಸುಧೀಂಧ್ರ ತೀರ್ಥಾರವರ ಪೂರ್ವಾಶ್ರಮದ ಹೆಜಮಾಡಿ ದೇವಸ್ಥಾನ ಮೊದಲಾದ ಪವಿತ್ರ ಕ್ಷೇತ್ರಗಳ ಪ್ರಸಾದವನ್ನು ಅರ್ಚಕರು ನೀಡಿದರು. ಬೆಳಗ್ಗೆ 10 ಗಂಟೆಗೆ ಪುತ್ತಿಗೆ ಶ್ರೀಗಳು ಪರ್ಯಾಯದ ಮೊದಲ ದಿನದ ಮಹಾಪೂಜೆ ನಡೆಸುವುದಕ್ಕೆ ಮೊದಲು ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಉಳಿದ ಪೂಜೆ ನೆರವೇರಿಸಿದರು.
ಹೀಗೆ ಉಡುಪಿಯ ಜನತೆಗೆ ಹಬ್ಬವೋ ಹಬ್ಬ. ಸುತ್ತಲೂ ಸಂಭ್ರಮದ ವಾತಾವರಣ.