ಮೈಸೂರು : ಕರ್ನಾಟಕ ತಂಡವು ಇಂದು ಶುಕ್ರವಾರದಿಂದ ಆರಂಭವಾಗುವ ರಣಜಿ ಟ್ರೋಫಿ ಕ್ರಿಕೆಟ್ ಕೂಟದ ʼಸಿʼ ಬಣದ ಮೂರನೇ ಸುತ್ತಿನ ಪಂದ್ಯದಲ್ಲಿ ಗೋವಾ ತಂಡವನ್ನು ಎದುರಿಸಲಿದೆ.
ಮೊದಲ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಅಮೋಘ ಗೆಲುವು ಸಾಧಿಸಿದ್ದ ಕರ್ನಾಟಕ ತಂಡವು ಅಹ್ಮದಾಬಾದ್ ನಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಗುಜರಾತ್ ವಿರುದ್ಧ ಹೀನಾಯವಾಗಿ ಆಡಿ ಸೋಲನ್ನು ಕಂಡಿತ್ತು. ಗೆಲ್ಲಲು ಕೇವಲ 110 ರನ್ ಗಳಿಸುವ ಗುರಿ ಪಡೆದಿದ್ದ ಕರ್ನಾಟಕ ತಂಡ ಒಂದು ಹಂತದಲ್ಲಿ ವಿಕೆಟ್ ನಷ್ಟವಿಲ್ಲದೆ 50 ರನ್ ಗಳಿಸಿದ್ದರೂ ಬಳಿಕ ಬ್ಯಾಟಿಂಗ್ ಕುಸಿತ ಕಂಡು 103 ರನ್ನಿಗೆ ಆಲೌಟಾಗಿ ಸೋಲನ್ನು ಕಂಡಿತ್ತು.
ಇಂದು ನಡೆಯುವ ಗೋವಾ- ಕರ್ನಾಟಕ ಪಂದ್ಯದಲ್ಲಿ ಗೆಲ್ಲಲು ಕರ್ನಾಟಕ ಶಕ್ತಿ ಮೀರಿ ಪ್ರಯತ್ನಿಸಬೇಕಾಗಿದೆ. ಈ ಪಂದ್ಯ ಮೈಸೂರಿನಲ್ಲಿ ನಡೆಯುತ್ತಿದೆ.
ʼಬಿʼ ಬಣದಲ್ಲಿರುವ ಮುಂಬಯಿ ತಂಡವು ತಿರುವನಂತಪುರದಲ್ಲಿ ನಡೆಯಲಿರುವ ಪಂದ್ಯದಲ್ಲಿ ಕೇರಳ ತಂಡದ ಸವಾಲನ್ನು ಎದುರಿಸಲಿದೆ. ಮುಂಬಯಿ ಈ ಹಿಂದಿನ ಎರಡು ಪಂದ್ಯಗಳಲ್ಲಿ ಬಿಹಾರ ಮತ್ತು ಆಂಧ್ರ ತಂಡವನ್ನು ಸೋಲಿಸಿದ ಸಾಧನೆ ಮಾಡಿದೆ.ಬಿಹಾರ ವಿರುದ್ಧ ಇನ್ನಿಂಗ್ಸ್ ಗೆಲುವು ಸಾಧಿಸಿದ್ದ ಮುಂಬಯಿ ತಂಡವು ಆಂಧ್ರ ವಿರುದ್ಧ 10 ವಿಕೆಟ್ ಗಳ ಜಯ ಸಾಧಿಸಿತ್ತು. ಇದೇ ವೇಳೆ ಕೇರಳ ತಂಡವು ಉತ್ತರ ಪ್ರದೇಶ ಮತ್ತು ಅಸ್ಸಾಂ ವಿರುಧ್ಧ ಆಡಿದು ಈ ಎರಡೂ ತಂಡಗಳು ಡ್ರಾ ಆಗಿದ್ದವು.