ಮೆಲ್ಬರ್ನ್ : ಆಸ್ಟ್ರೇಲಿಯನ್ ಓಪನ್-2024ನಲ್ಲಿ ಭಾರತದ ಟೆನಿಸಿಗ ಸುಮಿತ್ ನಾಗಲ್ ಆಸ್ಟ್ರೇಲಿಯನ್ ಓಪನ್ ಗ್ರಾನ್ ಸ್ಲಾಮ್ ಪಂದ್ಯಾವಳಿಯಲ್ಲಿ ದ್ವಿತೀಯ ಸುತ್ತು ಪ್ರವೇಶಿಸುವ ಮೂಲಕ ದೇಶದ ಕ್ರೀಡಾಪ್ರೇಮಿಗಳನ್ನು ಸಂಭ್ರಮಿಸುವಂತೆ ಮಾಡಿದ್ದಾರೆ.35 ವರ್ಷಗಳ ಬಳಿಕ ಭಾರತದ ಟೆನಿಸಿಗನೋರ್ವ ಇದೇ ಮೊದಲು ಗ್ರ್ಯಾನ್ ಸ್ಲಾಮ್ ನಲ್ಲಿ ಪ್ರಥಮ ಸುತ್ತು ದಾಟಿರುವುದು.
ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ 26 ವರ್ಷದ ಸುಮಿತ್ ನಾಗಲ್ ಕಜಕಸ್ಥಾನದ ,27 ನೇ ರಾಂಕಿಂಗ್ ಆಟಗಾರ ಅಲೆಕ್ಸಾಂಡರ್ ಬಬ್ಲಿಕ್ ಅವರನ್ನು 6-4, 6-2, 7-6(7-5) ನೇರ ಸೆಟ್ ಗಳಿಂದ ಮಣಿಸಿ ಮೆಲ್ಬರ್ನ್ ಪಾರ್ಕ್ ನಲ್ಲಿ ಸಂಚಲನ ಮೂಡಿಸಿದರು.ನಾಗಲ್ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಮ್ ನಲ್ಲಿ ಮೊದಲ ಸುತ್ತು ದಾಟಿದ ಮೊದಲ ನಿದರ್ಶನ ಇದಾಗಿದೆ.ಭಾರತದ ಟೆನಿಸಿಗ ಅರ್ಹತಾ ಸುತ್ತಿನ ಮೂಲಕ ಪ್ರವೇಶ ಪಡೆದಿದ್ದರು.ಶುಕ್ರವಾರದ ಫೈನಲ್ ನಲ್ಲಿ ಸ್ಲೊವಾಕಿಯಾದ ಅಲೆಕ್ಸ್ ಮೊಲ್ಕಾನ್ ಅವರನ್ನು ನೇರ ಸೆಟ್ ಗಳಲ್ಲಿ ಕೆಡವಿ ಮುಖ್ಯ ಸುತ್ತಿಗೆ ಬಂದಿದ್ದರು.
ಗುರುವಾರದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಸುಮಿತ್ ನಾಗಲ್ ಚೀನದ ಶಾಂಗಾ ಜುಂಚೆಂಗ್ ಅವರನ್ನು ಎದುರಿಸಲಿದ್ದಾರೆ.ಜುಂಚೆಂಗ್ ಅಮೇರಿಕಾದ ಮೆಕೆಂಜಿ ಮೆಕ್ ಡೊನಾಲ್ಡ್ ಅವರನ್ನು 5 ಸೆಟ್ ಗಳ ಕಾದಾಟದಲ್ಲಿ ಸೋಲಿಸಿದ್ದರು.
ಸುಮಿತ್ ನಾಗಲ್ 2013 ರ ಬಳಿಕ ಗ್ರ್ಯಾನ್ ಸ್ಲಾಮ್ ಕೂಟವೊಂದರ ಮೊದಲ ಸುತ್ತಿನ ಪಂದ್ಯ ಜಯಿಸಿದ ಭಾರತದ ಪ್ರಥಮ ಆಟಗಾರ.2013 ರ ಯು ಎಸ್ ಓಪನ್ ಕೂಟದಲ್ಲಿ ಸೋಮದೇವ್ ದೇವವರ್ಮನ್ ಪೋರ್ಚುಗಲ್ ನ ಫೆಡ್ರಿಕೆ ಗಿಲ್ ಅವರನ್ನು ಮಣಿಸಿ ಈ ಸಾಧನೆ ಗೈದಿದ್ದರು.ಬಳಿಕ ದ್ವಿತೀಯ ಸುತ್ತಿನಲ್ಲಿ ಜರ್ಮನಿಯ ಫಿಲಿಪ್ ಕೋಹ್ಲ್ ಶ್ರೀಬರ್ ಅವರಿಂದ ಸೋಲಲ್ಪಟ್ಟಿದ್ದರು.
ವಿಶ್ವದ 137 ನೇ ರಾಂಕಿಂಗ್ ಆಟಗಾರನಾಗಿರುವ ಸುಮಿತ್ ನಾಗಲ್ ಮತ್ತು ಅಲೆಕ್ಸಾಂಡರ್ ಬಬ್ಲಿಕ್ ನಡುವೆ 2 ಗಂಟೆ, 38 ನಿಮಿಷಗಳ ಹೋರಾಟ ಸಾಗಿತು. ನಾಗಲ್ ಕೇವಲ ಆಸ್ಟ್ರೇಲಿಯನ್ ಓಪನ್ ನಲ್ಲಷ್ಟೇ ಅಲ್ಲ , ಗ್ರ್ಯಾನ್ ಸ್ಲಾಮ್ ಕೂಟಗಳಲ್ಲೇ ದ್ವಿತೀಯ ಸುತ್ತು ತಲುಪಿದ ಮೊದಲ ನಿದರ್ಶನ ಇದಾಗಿದೆ.